ಕ್ರಿಯಾತ್ಮಕವಾಗಿ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಸಂತ ಅಲೋಶಿಯಸ್ ಪದವಿ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರಾದ ಪ್ರೊ. ರೊನಾಲ್ಡ್ ಪಿಂಟೋ ಹೇಳಿದರು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನಡೆದ ವ್ಯಕ್ತಿತ್ವ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ದೃಢತೆಯ ಕಡೆಗೆ ಗುರಿಯನ್ನು ಇಟ್ಟುಕೊಂಡು ನಡೆದಾಗ ನಮ್ಮ ವಿದ್ಯಾಸಂಸ್ಥೆ ನೀಡಿದ ಶಿಕ್ಷಣ ಸಾರ್ಥಕವಾಗುತ್ತದೆ. ಜೊತೆಗೆ ಮಾನವೀಯತೆಯನ್ನು ರೂಢಿಸಿಕೊಂಡು ಬಾಳಿದರೆ ಮಾತ್ರ ಗೌರವ ಸಿಗುತ್ತದೆ. ಗೌರವ ನಮ್ಮನ್ನು ಹುಡುಕಿಕೊಂಡು ಬರುವ ರೀತಿಯಲ್ಲಿ ನಾವು ಬೆಳೆಯಬೇಕು. ಜೀವನದಲ್ಲಿ ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಹೋದಾಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ. ನಾವು ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು. ನಂತರ ಕಲಿಯುವಿಕೆಯ ವಿವಿಧ ಹಂತಗಳನ್ನು ಪರಿಚಯಿಸಿಕೊಟ್ಟರು. ಪಿಯುಸಿ ನಂತರ ಲಭ್ಯವಿರುವ ವಿವಿಧ ಕೋರ್ಸ್‌ಗಳು ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳ ಮಾಹಿತಿಯನ್ನು ಈ ಸಂದರ್ಭದಲ್ಲಿ ಒದಗಿಸಿಕೊಟ್ಟರು.
ಸಮಾರಂಭದಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ಪ್ರಸಾದ್ ಶ್ಯಾನಭಾಗ್, ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ದಯಾಮಣಿ ಸ್ವಾಗತಿಸಿದರು. ಉಪನ್ಯಾಸಕಿ ಕುಮಾರಿ ಸ್ನೇಹ ವಂದಿಸಿದರು.