ದೃಢತೆಯ ಕಡೆಗೆ ಗುರಿಯನ್ನು ಇಟ್ಟುಕೊಂಡು ನಡೆದಾಗ ನಮ್ಮ ವಿದ್ಯಾಸಂಸ್ಥೆ ನೀಡಿದ ಶಿಕ್ಷಣ ಸಾರ್ಥಕವಾಗುತ್ತದೆ. ಜೊತೆಗೆ ಮಾನವೀಯತೆಯನ್ನು ರೂಢಿಸಿಕೊಂಡು ಬಾಳಿದರೆ ಮಾತ್ರ ಗೌರವ ಸಿಗುತ್ತದೆ. ಗೌರವ ನಮ್ಮನ್ನು ಹುಡುಕಿಕೊಂಡು ಬರುವ ರೀತಿಯಲ್ಲಿ ನಾವು ಬೆಳೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಸುಲೋಚನಾ ಜಿ.ಕೆ.ಭಟ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕನಸನ್ನು ಬಿತ್ತುವ ಕೆಲಸವನ್ನು ವಿದ್ಯಾಸಂಸ್ಥೆಯು ಮಾಡುತ್ತಿದೆ. ಇಂತಹ ಕನಸುಗಳಿಂದ ಬದುಕಿಗೊಂದು ಸ್ವಾರಸ್ಯ ಸಿಗುತ್ತದೆ. ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಜಗತ್ತಿನಲ್ಲಿ ಪರಿಹರಿಸಲು ಅಸಾಧ್ಯವಾದ ಸಮಸ್ಯೆಗಳಿಲ್ಲ. ಶಿಸ್ತಿನ ವ್ಯಾಸಂಗದೊಂದಿಗೆ ದೃಢತೆಯನ್ನು ಮೈಗೂಡಿಸಿಕೊಂಡು ಪ್ರಗತಿಪಥದತ್ತ ಸಾಗೋಣ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ನಾವು ನಮ್ಮತನವನ್ನು ಕಾಪಾಡಿಕೊಂಡು ಸ್ವಾಭಿಮಾನವನ್ನು ಹೊಂದಬೇಕು. ಜಗತ್ತಿನ ಎಲ್ಲಾ ಶಕ್ತಿಗಳಿಗೆ ಸಡ್ಡು ಹೊಡೆದು ಉನ್ನತ ಸಾಧನೆ ಮಾಡಿದ ಶ್ರೇಷ್ಠ ವಿಜ್ಞಾನಿಗಳನ್ನು ನೀಡಿದ ದೇಶ ಭಾರತ. ಹಾಗಾಗಿ ನಾವು ಎಂದಿಗೂ ನಮ್ಮ ದೇಶದ ಸಂಸ್ಕ್ರತಿಗೆ ನಿಷ್ಠರಾಗಿರಬೇಕು. ನಮ್ಮ ದೇಶಕ್ಕೆ ಅಮೇರಿಕಾ ಎಂದಿಗೂ ಮಾದರಿಯಾಗಲಾರದು. ಬದುಕಲು ಕಲಿಸಿ ಕೊಟ್ಟ ಹಿರಿಯ ದಾರ್ಶನಿಕರೇ ನಮಗೆ ಮಾದರಿ. ಭಾರತದ ಅಭ್ಯುದಯವೇ ಇಡೀ ದೇಶದ ಅಭ್ಯುದಯ. ಈ ಭಾರತ ದೇಶ ನಮಗೆ ಎಲ್ಲಾವನ್ನು ನೀಡಿದೆ. ಈ ದೇಶಕ್ಕೋಸ್ಕರ ನಾವೇನು ನೀಡಿದ್ದೇವೆ ಎಂದು ಎಲ್ಲರೂ ಚಿಂತಿಸಬೇಕಾದ ಕಾಲ ಬಂದಿದೆ ಎಂದರು.
ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ., ಸಂಚಾಲಕರಾದ ಶ್ರೀ ಸಂತೋಷ್ ಬಿ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಶ್ಯಾಮಲ ಮಿತ್ತೂರು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪರಮೇಶ್ವರ ಶರ್ಮ ಸ್ವಾಗತಿಸಿದರು.ಕಲಾ ವಿಭಾಗದ ಉಪನ್ಯಾಸಕಿ ಶ್ರೀಮತಿ ಯಶವಂತಿ ವಂದಿಸಿದರು. ಬಳಿಕ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.