ಸೋಲು ಬಂದಾಗ ಬದುಕಿನ ಧ್ಯೇಯವನ್ನು ಮರೆಯದಿರಿ: ಡಾ. ಕೆ. ಯಂ. ಕೃಷ್ಣ ಭಟ್
ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸಿದಾಗ ವ್ಯಕ್ತಿತ್ವದ ಗಟ್ಟಿತನ ಪ್ರಕಟಗೊಳ್ಳುತ್ತದೆ. ವಿಪತ್ತಿನ ಸಂದರ್ಭದಲ್ಲಿ ಅಂಜಿಕೆಯಿಂದ ಅಳುಕಿ ನಡೆದರೆ ಅನಾಹುತ ಉಂಟಾಗುತ್ತದೆ. ಕಷ್ಟ ಬಂದಾಗ ಕುಗ್ಗದೆ ಮುನ್ನಡೆಯಬೇಕು. ಸೋತಾಗ ನಿರಾಶೆಯನ್ನು ಅನುಭವಿಸದೆ, ಬದುಕಿನ ಧ್ಯೇಯವನ್ನು ಮರೆಯದೆ, ಗೆಲುವಿನತ್ತ ಮುನ್ನುಗ್ಗಿದರೆ ಜೀವನ ಸಾರ್ಥಕವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಯಂ ಕೃಷ್ಣ ಭಟ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಳ ಬದುಕಿನ ಮುನ್ನೋಟ, ಮಾನವೀಯ ಮಿಡಿತ, ಪರಂಪರೆಯ ಮೇಲಿನ ಗೌರವಗಳನ್ನು ನಿಜಜೀವನದಲ್ಲಿ ಅಳವಡಿಸಿಕೊಂಡಾಗ ಮನಸ್ಸು ವಿಕಾಸಗೊಳ್ಳುತ್ತದೆ. ಸೃಜನಶೀಲತೆ, ಧೈರ್ಯ ಮತ್ತು ಛಲ ಇದ್ದರೆ ಕನಸನ್ನು ನನಸಾಗಿಸಲು ಸಾಧ್ಯ. ಭವಿಷ್ಯದ ಬಗ್ಗೆ ಕನಸುಗಳು ಇದ್ದರೆ ಜೀವನ ಪರಿಪೂರ್ಣವಾಗಿರುತ್ತದೆ. ಕ್ಷಮತೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಎಲ್ಲವೂ ವ್ಯರ್ಥ. ವೈಯಕ್ತಿಕ ಕನಸಿನ ಜೊತೆಗೆ ದೇಶವನ್ನು ಉನ್ನತಿಗೇರಿಸುವ ಕನಸನ್ನು ಪ್ರತಿಯೊಬ್ಬರೂ ಕಾಣಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಅದ್ಭುತ ಕನಸುಗಳ ಆಗರ. ಅವರ ಅಂತರಂಗದಲ್ಲಿ ಹರಿಯುವ ಕನಸುಗಳ ಶಕ್ತಿ ಸಾಮರ್ಥ್ಯಗಳು ಅಪಾರ. ಮನಸ್ಸನ್ನು ಸದಾ ಕ್ರಿಯಾಶೀಲವಾಗಿರಿಸುವ ವಿದ್ಯಾರ್ಥಿಗಳ ಕನಸನ್ನು ಈಡೇರಿಸುವ ಕಾರ್ಯವನ್ನು ಈ ಕಾಲೇಜು ಮಾಡುತ್ತಿದೆ. ಇದರ ಸಾಕಾರಕ್ಕಾಗಿ ನಮಗೆ ನಮ್ಮ ಮೇಲೆ ನಂಬಿಕೆ ಇರಬೇಕು. ಸಮಾಜಮುಖಿ ವ್ಯಕ್ತಿತ್ವನ್ನು ರೂಢಿಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಚಾಲಕ ಸಂತೋಷ್ ಬಿ, ಸದಸ್ಯರಾದ ರವಿ ಮುಂಗ್ಲಿಮನೆ, ಶ್ರೀನಿವಾಸ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಶ್ರೀಧರ್ ಶೆಟ್ಟಿಗಾರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ದಯಾಮಣಿ ನಿರೂಪಿಸಿ ಪ್ರಾಂಶುಪಾಲ ಜೀವನದಾಸ್ ವಂದಿಸಿದರು.
ವೈವಿಧ್ಯಮಯ ಸ್ಪರ್ಧೆಗಳು:
ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ವಿಜ್ಞಾನ ಮಾದರಿ, ಚರ್ಚಾಸ್ಪರ್ಧೆ, ಕಂಪ್ಯೂಟರ್ ಪವರ್ ಪಾಯಿಂಟ್, ಮುಖವರ್ಣಿಕೆ, ಪ್ರಾಕೃತಿಕ ರಂಗೋಲಿ, ಗೂಡುದೀಪ, ದೃಶ್ಯಕಲೆ, ಚದುರಂಗ, ಯವವಿಜ್ಞಾನಿ ಸ್ಪರ್ಧೆಗಳು ನಡೆದವು. ತಕ್ಷಣವೇ ಬಹುಮಾನ ಗೆಲ್ಲಬಹುದಾದಂಥ ಆಸಕ್ತಿದಾಯಕ ಸ್ಪರ್ಧೆಗಳಾದ ಸುಡೊಕು, ಪದಬಂಧ, ಒಗಟು, ಘನಾಕೃತಿಯ ಜೋಡಣೆ, ಏಕಾಗ್ರತೆಯ ಪರೀಕ್ಷೆಗಳನ್ನು ನಡೆಸಲಾಯಿತು. ಉಪಪ್ರಾಂಶುಪಾಲ ಪರಮೇಶ್ವರ ಶರ್ಮರ ನೇತೃತ್ವದಲ್ಲಿ ಅಡ್ಯನಡ್ಕದ ’ವಾರಣಾಸಿ’ಯನ್ನು ಸಂದರ್ಶಿಸಿದ ವಿದ್ಯಾರ್ಥಿಗಳು ಪ್ರಗತಿಪರ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿಗಳನ್ನು ಪಡೆದುಕೊಂಡರು. ಸುಮಾರು 26 ಪ್ರೌಢಶಾಲೆಗಳ 636 ವಿದ್ಯಾರ್ಥಿಗಳು ಮತ್ತು 51 ಅಧ್ಯಾಪಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.