ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಛಲ ಮತ್ತು ಆತ್ಮವಿಶ್ವಾಸ ಇದ್ದಾಗ ತಮ್ಮ ಕನಸನ್ನು ನನಸಾಗಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇದರ ವಿಶ್ರಾಂತ ಕುಲಪತಿಯವರಾದ ಡಾ| ಮೀನಾ ಚಂದಾವರ್ಕರ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2016 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನಸು ಇದ್ದರೆ ಮಾತ್ರ ಜೀವನ ಪರಿಪೂರ್ಣವಾಗಿರುತ್ತದೆ. ಆದರೆ ನಮ್ಮ ಕ್ಷಮತೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಎಲ್ಲವೂ ವ್ಯರ್ಥ. ಯಾವ ಕನಸು ನಮ್ಮನ್ನು ನಿದ್ರಿಸಲು ಬಿಡುದಿಲ್ಲವೋ ಅದು ನಿಜವಾದ ಕನಸು. ವಿದ್ಯಾರ್ಥಿಗಳಿಂದ ಮಾತ್ರ ಒಳ್ಳೆಯ ಹಿಂದುಸ್ತಾನವನ್ನು ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ತಮ್ಮಲಿರುವ ಸೃಜನಶೀಲತೆ, ವಿಚಾರೆಧಾರೆಯಿಂದ ಉತ್ತಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಕ್ರೀಡಾಪಟು ಶ್ರೀ ಸಂದೇಶ್ ಬಿ.ಜಿ ಮಾತನಾಡಿ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಇತರ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಾಗ ತಮ್ಮ ಕನಸನ್ನು ನನಸಾಗಿಸಲು ಸಾಧ್ಯ. ಇದಕ್ಕೆ ಯಾವುದೇ ಕಷ್ಟಗಳು ಬಂದರೂ ನಿರಂತರ ಪ್ರಯತ್ನ ಮತ್ತು ಹುರುಪಿನಿಂದ ಯಶಸ್ಸು ಗಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಡಾ| ಕೆ. ಎಂ. ಕೃಷ್ಣಭಟ್ ಮಾತನಾಡಿ ವಿದ್ಯಾರ್ಥಿಗಳು ಟಿ.ವಿ, ಮೊಬೈಲ್ ಮುಂತಾದ ಮಾಧ್ಯಮಗಳಿಂದ ದೂರವಿದ್ದಾಗ ತಮ್ಮ ಮನಸ್ಸಿನಲ್ಲಿರುವ ಕನಸು ಚಿಗುರೊಡೆದು ಕಾರ್ಯರೂಪಕ್ಕೆ ತರಲು ಸಾಧ್ಯ. ತಿರುಕನ ಕನಸಿನಂತಹುಗಳು ನಮ್ಮನ್ನು ಏಳಿಗೆಯತ್ತ ಕೊಂಡೊಯ್ಯುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಇಸ್ರೋ ಸ್ಯಾಟಲೈಟ್ ಸೆಂಟರ್ನ ವಿಜ್ಞಾನಿ ಡಾ| ವಿ. ರಾಧಕೃಷ್ಣ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ, ಸಂಚಾಲಕರಾದ ಶ್ರೀ ಸಂತೋಷ್ ಬಿ, ಪ್ರಾಂಶುಪಾಲರಾದ ಶ್ರೀ ಜೀವನ್ದಾಸ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಶ್ರೀ ರೋಹಿತ್ ಅತಿಥಿಗಳನ್ನು ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು.ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಲಾ ವಿಭಾಗದ ಉಪನ್ಯಾಸಕಿ ಶ್ರೀಮತಿ ಯಶವಂತಿ ವಂದಿಸಿದರು.