ಕ್ರಿಯಾ ಧರ್ಮದ ಮುನ್ನೋಟ, ಮಾನವೀಯ ಮಿಡಿತ ಮತ್ತು ಸದಭಿರುಚಿಗಳು ವಿದ್ಯಾರ್ಥಿಯ ಬದುಕಿನ ಸೂತ್ರಗಳು. ಆಸಕ್ತಿ, ಅನುಭವ ಜ್ಞಾನ ಮತ್ತು ಜೀವನ ಪ್ರೀತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಪ್ರತಿ ವಿದ್ಯಾರ್ಥಿಯೂ ಉನ್ನತ ಮಟ್ಟಕ್ಕೆ ಏರಬಹುದು ಎಂದು ಇಸ್ರೋದ ನಿವೃತ್ತ ವಿಜ್ಞಾನಿ ಡಾ.ಕೃಷ್ಣಸ್ವಾಮಿ ಹೇಳಿದರು.
ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಾಧನೆ ಮತ್ತು ಗೆಲುವು ವಿದ್ಯಾರ್ಥಿಯ ಬೆಳವಣಿಗೆಯ ಸಂಕೇತ. ವಿದ್ಯಾರ್ಥಿ ಬೆಳೆದಂತೆಲ್ಲ ಪ್ರೌಢ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ವಿದ್ಯಾರ್ಥಿ ಮಾಗಿದಂತೆಲ್ಲ ತನ್ನ ಸುತ್ತಲೂ ವೈಜ್ಞಾನಿಕ, ಸಾಂಸ್ಕೃತಿಕ ಲೋಕವನ್ನು ನಿರ್ಮಿಸಬಲ್ಲ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಶಿಕ್ಷಣದ ದಾಹವಿರಬೇಕು. ಅದು ಇನ್ನೊಬ್ಬರಿಗೆ ಸ್ಫೂರ್ತಿಯಾಗಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಶ್ರದ್ಧೆ, ತಾಳ್ಮೆ ಮತ್ತು ಪ್ರಾಮಾಣಿಕತೆಗಳನ್ನು ರೂಢಿಸಿಕೊಂಡರೆ ಬದುಕು ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ ಮಾದರಿ ನಿರ್ಮಾಣದಲ್ಲಿ ರಾಷ್ಟ್ರಮಟ್ಟದ ಸಾಧನೆಗಾಗಿ ಅಸಾಧಾರಣ ಪ್ರತಿಭಾ ಪುರಸ್ಕಾರವನ್ನು ಮಾನ್ಯ ರಾಷ್ಟ್ರಪತಿಯವರಿಂದ ಮಕ್ಕಳ ದಿನಾಚರಣೆಯಂದು ಪಡೆದ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸ್ವಸ್ತಿಕ್ ಪದ್ಮ, ರಾಷ್ಟ್ರಮಟ್ಟದ SGFI ಚೆಸ್ ಪಂದ್ಯಾಟದಲ್ಲಿ ದ್ವಿತೀಯ ಬಹುಮಾನ ಮತ್ತು ಬೆಳ್ಳಿ ಪದಕ ವಿಜೇತ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಹಿರಿಂಜ ಮತ್ತು ರಾಷ್ಟ್ರಮಟ್ಟದ SGFI ಚೆಸ್ ಪಂದ್ಯಾಟದಲ್ಲಿ ತೃತೀಯ ಬಹುಮಾನ ಮತ್ತು ಕಂಚಿನ ಪದಕ ವಿಜೇತ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪಂಚಮಿ ಸರ್ಪಂಗಳ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ರವಿ ಮಂಗ್ಲಿಮನೆ, ಪ್ರಾಂಶುಪಾಲರಾದ ಜೀವನ್‌ದಾಸ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ರೈ, ಡಾ. ಕೃಷ್ಣಸ್ವಾಮಿಯ ಧರ್ಮಪತ್ನಿ ಬಾನು ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಜಯಶ್ರೀ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಅಕ್ಷತಾ ನಿರೂಪಿಸಿ ಹರ್ಷಿತಾ ವಂದಿಸಿದರು.