ರವೀಂದ್ರರು ನಿಸರ್ಗ ಪ್ರೇಮಿ. ಪ್ರಕೃತಿಯ ಆರಾಧಕರಾಗಿದ್ದರು. ಆದ್ದರಿಂದಲೇ ಶಾಂತಿನಿಕೇತನ ಮತ್ತು ವಿಶ್ವಭಾರತಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರು.
ರವೀಂದ್ರನಾಥ ಠಾಗೋರ್ ಜನಿಸಿದ್ದು ಕೋಲ್ಕತ್ತಾದಲ್ಲಿ. ದೇಬೇಂದ್ರನಾಥ ಠಾಗೋರ್ ಮತ್ತು ಶಾರದಾ ದೇವಿಯ ಮಗನಾಗಿ 1861ರ ಮೇ 9 ರಂದು ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಇವರು ಸರಳ ಜೀವನವನ್ನು ನಡೆಸಿದರು. ಸ್ವಂತ ಆಲೋಚನೆಗಳಿಗೆ ಅವಕಾಶವಿಲ್ಲದ ಔಪಚಾರಿಕ ಶಿಕ್ಷಣವನ್ನು ಚಿಕ್ಕಂದಿನಿಂದಲೆ ಧಿಕ್ಕರಿಸಿದರು. ಅವರಿಗೆ ಶಾಲೆಗಳು ಸೆರೆಮನೆಯಂತೆ ಕಂಡವು.
ಅದಕ್ಕಾಗಿ ನಿಸರ್ಗದ ಮಡಿಲಲ್ಲಿ 1901 ರಲ್ಲಿ ಶಾಂತಿ ನಿಕೇತನ ಪ್ರಾರಂಭಿಸಿದರು. ಅದು ಮುಂದೆ 1921 ರಲ್ಲಿ ವಿಶ್ವಭಾರತಿ ವಿಶ್ವವಿದ್ಯಾಲಯವಾಗಿ ಅಂತರಾಷ್ಟ್ರೀಯ ಖ್ಯಾತಿ ಪಡೆಯಿತು. 1902 ರ ಹೊತ್ತಿಗೆ ಪತ್ನಿಯ ನಿಧನ ಅವರನ್ನು ಸ್ಥಿತ ಪ್ರಜ್ಞರಾಗಿರುವಂತೆ ಮಾಡಿದವು. 1909 ರಲ್ಲಿ ಜಗತ್ಪ್ರಸಿದ್ದ ಗೀತಾಂಜಲಿ ರಚನೆಯಾಯಿತು. 1913 ರಲ್ಲಿ ಇದಕ್ಕೆ ನೊಬೆಲ್ ಪಾರಿತೋಷಕ ದೊರೆಯಿತು. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಸರಿಸುಮಾರು 2230 ಕ್ಕಿಂತ ಕವನಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮತ್ತು ಗೀತಾಂಜಲಿಗಾಗಿ ಅವರಿಗೆ ನೋಬೆಲ್ ಪ್ರಶಸ್ತಿ 1913 ದೊರಕಿತು. ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷಿಯಾದ ಮೊದಲ ವ್ಯಕ್ತಿ ಮತ್ತು ಮೊದಲ ಭಾರತೀಯಯ ಎಂಬ ಹೆಗ್ಗಳಿಕೆ ಅವರದ್ದು. ಸ್ವಾತಂತ್ರ್ಯ ಹೋರಾಟದ ಸಂಧರ್ಭ ಜಲಿಯಾನ್ ವಾಲಾಭಾಗ್ ಹತ್ಯಾಕಾಂಡ ಖಂಡಿಸಿ 1919ರಲ್ಲಿ ತನಗೆ ದೊರೆತ ನೋಬೆಲ್ ಪ್ರಶಸ್ತಿ ಪುರಸ್ಕಾರವನ್ನು ಹಿಂದಿರುಗಿಸಿದರು. ಇದು ಇವರ ಜೇಷ್ಟತೆಗೆ ಹಿಡಿದ ಕೈಗನ್ನಡಿ.
ಭಾರತದ ರಾಷ್ಟ್ರಗೀತೆಯಾದ ಜನ ಗಣ ಮನ ಬರೆದವರು ಗುರುದೇವ ರವೀಂದ್ರರೆ. ಮಾತ್ರವಲ್ಲ ಬಾಂಗ್ಲಾದ ರಾಷ್ಟ್ರಗೀತೆಯಾದ ಅಮರ್ ಸೋನಾರ್ ಬಾಂಗ್ಲಾ ಮತ್ತು ಶ್ರೀಲಂಕಾ ರಾಷ್ಟರಗೀತೆಯ ಮೂಲಗೀತೆಯನ್ನು ಗುರುದೇವ ರವೀಂದ್ರರ ಕವಿತೆ ಯಿಂದ ಆರಿಸಿಕೊಳ್ಳಲಾಗಿದೆ. ಹೀಗೆ ಗುರುದೇವ ರವೀಂದ್ರರು ಒಂದಕ್ಕಿಂತ ಹೆಚ್ಚು ದೇಶಗಳಿಗೆ ರಾಷ್ಟ್ರಗೀತೆ ಬರೆದ ಕವಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ, ಗಾಂಧಿಜೀಯವರು ರವೀಂದ್ರನಾಥ ಠಾಗೋರ್ರ ಸಾಧನಾಮಯ ಜೀವನಕ್ಕೆ ‘ಗುರುದೇವ’ ಎಂದು ಬಿರುದು ನೀಡಿದರು. ಆದುದರಿಂದಲೇ ಅವರನ್ನು ಗುರುವೇವ ರವೀಂದ್ರನಾಥ ಠಾಗೋರ್ ಎಂದು ಕರೆಯಲಾಗುತ್ತದೆ
ಯುರೋಪ್, ಜಪಾನ್, ಅಮೆರಿಕಾ ಮುಂತಾದ ರಾಷ್ಟ್ರಗಳಿಗೆ ಬೇಟಿ ನೀಡಿ ಶಿಕ್ಷಣ ಕ್ರಮದ ಬಗ್ಗೆ ಅಧ್ಯಯನ ನಡೆಸಿದರು. ಇವರೊಬ್ಬ ಕವಿ, ತತ್ವಜ್ಞಾನಿ, ನಾಟಕಕಾರ, ಕಾದಂಬರಿಕಾರ ವರ್ಣಚಿತ್ರಕಾರ, ಕಾನೂನು ಪರಿಣಿತ, ಶಿಕ್ಷಣ ತಜ್ಞ, ಸಾಹಿತಿ, ಪ್ರಕೃತಿ ಪ್ರೇಮಿ, ಸಂಗೀತಗಾರ, ದೇಶಪ್ರೇಮಿಯಾಗಿದ್ದ ರವೀಂದ್ರರು 1941 ರಲ್ಲಿ ಇನ್ನಿಲ್ಲವಾದರು. ಆದರೆ ಅವರ ಶೈಕ್ಷಣಿಕ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದೆ.
ರವೀಂದ್ರರು ಶಿಕ್ಷಣ ಹೇಗಿರಬೇಕು ಎನ್ನುವುದಕ್ಕೆ ಒಂದು ಕಡೆ ಪ್ರಕೃತಿಯೊಡನೆ ಸಂಬಂಧ ಮತ್ತೊಂದೆಡೆ ಭಾರತೀಯ ಭಾವನೆಯ ಸುಖವನ್ನು ಅನುಭವಿಸುವಂತೆ ಇರಬೇಕು ಎಂದು ಹೇಳಿದರು. ಅದಕ್ಕಾಗಿ ಈ ಕೆಳಗಿನ ಅಂಶಗಳಿಗೆ ಹೆಚ್ಚಿನ ಒತ್ತು ನೀಡಿದರು.
• ಮಗುವಿನ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಪರಿಣಾಮಕಾರಿ ಕಲಿಕೆಗೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿರಬೇಕು.
• ಮಕ್ಕಳನ್ನು ಅತಿಯಾದ ನಿಯಂತ್ರಣಕ್ಕೆ ಒಳಪಡಿಸಿದರೆ ನಿರ್ಜೀವ ವಸ್ತುಗಳನ್ನು ಸಂರಕ್ಷಿಸಿದಂತೆ ಹಾಗೂ ನಾಲ್ಕು ಗೋಡೆಗಳ ಮಧ್ಯೆ ಜೀವರಹಿತ ಮತ್ತು ಬಣ್ಣರಹಿತ ವಸ್ತುಗಳನ್ನು ತಯಾರಿಸಿದಂತೆ ಆಗುತ್ತದೆ. ಅದಕ್ಕಾಗಿ ಮಕ್ಕಳ ಭಾವನೆ ಅಭಿವ್ಯಕ್ತತೆ, ಕಲ್ಪನೆ, ಅನುಕಂಪ, ಪ್ರೇಮ ಮುಂತಾದವುಗಳನ್ನು ವ್ಯಕ್ತಪಡಿಸಲು ಸ್ವಾತಂತ್ರ ಕೊಡಬೇಕು.
• ಗುರುಕುಲ ಶಿಕ್ಷಣ ವ್ಯವಸ್ಥೆಯಂತೆ ಗುರು- ಶಿಷ್ಯರ ಮಧ್ಯದಲ್ಲಿ ಸಂಬಂಧವಿರಬೇಕು.
• ಮಕ್ಕಳಿಗೆ ನಿಸರ್ಗದ ನೇರ ಸಂಪರ್ಕದಲ್ಲಿ ಶಿಕ್ಷಣವನ್ನು ನೀಡುವುದರಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ. ಮಕ್ಕಳು ನಿಸರ್ಗ ಸಂಪರ್ಕ ಪಡೆದಂತೆ ಸಾಮಾಜಿಕ ಮೌಲ್ಯಗಳನ್ನು ಮಗುವಿಗೆ ತಿಳಿಸಬೇಕು. ಪ್ರಕೃತಿ ಮತ್ತು ಸಾಮಾಜಿಕ ಸಂಪರ್ಕ ಮಗುವಿಗೆ ಅವಶ್ಯಕ.
• ಭಾರತೀಯ ಸಂಸ್ಕೃತಿ ಪುರಾತನವಾದದ್ದು ಮತ್ತು ಉತ್ಕೃಷ್ಟವಾದದ್ದು. ನಮ್ಮ ಶಿಕ್ಷಣವು ಸಂಸ್ಕೃತಿಯನ್ನು ಉಳಿಸುವಂತಹುದಾಗಿರಬೇಕು.
• ಮಕ್ಕಳಲ್ಲಿ ಅಡಗಿರುವ ಕಲೆ ಮತ್ತು ಪ್ರತಿಭೆಯನ್ನು ಹೊರಗೆಳೆಯಲು ಸ್ವಯಂ ಅಭಿವ್ಯಕ್ತತೆಗೆ ಅವಕಾಶ ಕಲ್ಪಿಸಬೇಕು.
• ಶಿಕ್ಷಕ ತಾನು ಜ್ಞಾನಿ ಎಂದುಕೊಳ್ಳದೆ ಪ್ರತಿನಿತ್ಯವು ಹೊಸ ವಿಷಯಗಳನ್ನು ಕಲಿಯುತ್ತಿರಬೇಕು. ಅಂದರೆ ಶಿಕ್ಷಕ ಯಾವಾಗಲು ವಿದ್ಯಾರ್ಥಿಯಾಗಿರುವುದರ ಜೊತೆಗೆ ಸ್ನೇಹಿತ, ಪಾಲಕ, ಮಾರ್ಗದರ್ಶಿ, ಸಾಕಾರ ಮೂರ್ತಿಯಾಗಿರಬೇಕು.
• ಶಾಲಾ ವ್ಯವಸ್ಥೆ ವಸತಿ ಸಹಿತವಾಗಿರಬೇಕು. ವಿದ್ಯಾರ್ಥಿಗಳು ತಮ್ಮ ನಿತ್ಯದ ಕರ್ತವ್ಯಗಳ ಜೊತೆಗೆ ಜಾತಿ, ಮತ ಭೇದಗಳಿಲ್ಲದೆ ಶಿಕ್ಷಣವನ್ನು ಪಡೆಯುವಂತೆ ಇರಬೇಕು.
• ಪಠ್ಯದಲ್ಲಿ ಕೈಗೆಲಸ, ಕಲೆ, ಸಂಗೀತ, ನೃತ್ಯದ ಜೊತೆಯಲ್ಲಿ ಜೀವನಕ್ಕೆ ಅವಶ್ಯವಾಗಿರುವ ವಿಷಯಗಳನ್ನು ಮತ್ತು ಅಂತರಾಷ್ಟ್ರೀಯ ವಿಷಯಗಳನ್ನು ಕಲಿಯಬೇಕು.
• ಶಿಸ್ತು ಸ್ವಯಂ ಪರಿಪೂರ್ಣವಾಗಿ ಉಂಟಾಗಬೇಕೇ ಹೊರತು. ಹೊರಗಿನಿಂದ ಹೇರುವಂತಹ ಪೋಲಿಸ್ ಶಿಸ್ತಾಗಿರಬಾರದು.
• ಸೃಜನ ಶೀಲತೆ ಮತ್ತು ಸ್ವಯಂ ಅಭಿವ್ಯಕ್ತಿಗೆ ಶಿಕ್ಷಣ ನೀಡಬೇಕು. ಅಂದರೆ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಸಹಾಯಕವಾಗಿರಬೇಕು.
ರವೀಂದ್ರರು ಅಂದು ಹೇಳಿದ ಪ್ರಕೃತಿ ಶಿಕ್ಷಣ, ಒತ್ತಡ ರಹಿತ ಶಿಕ್ಷಣ ಇಂದಿಗೂ ಪ್ರಸ್ತುತವಾಗಿ ಮಗುವಿನ ಪರಿಪೂರ್ಣ ಕಲಿಕೆಗೆ ಸಹಾಯಕವಾಗಿರುತ್ತದೆ.