ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳ ಆಶ್ರಮ ಭೇಟಿ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಬಂಟ್ವಾಳ ತಾಲೂಕಿನ ಭಾರತ ಸೇವಾಶ್ರಮ, ಕನ್ಯಾನ ಇಲ್ಲಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಹಿರಿಯ-ಕಿರಿಯರೊಂದಿಗೆ ಸಮಯವನ್ನು ಕಳೆದಿದ್ದಾರೆ.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜೀವನ್ದಾಸ್ ಎ., ಉಪನ್ಯಾಸಕಿಯಾರಾದ ಮೇಘಾ ದೇವಾಡಿಗ ಮತ್ತು ಕುಮಾರಿ ಅನುಶ್ರೀ ಇವರ ನೇತೃತ್ವದಲ್ಲಿ ಆಶ್ರಮಕ್ಕೆ ಭೇಟಿ ನೀಡಿದರು. ಆಶ್ರಮದ ಅಧ್ಯಕ್ಷರಾದ ಈಶ್ವರ ಭಟ್ ಮಾತನಾಡಿ ತಂದೆ- ತಾಯಿ,ಅಜ್ಜ- ಅಜ್ಜಿ, ಅಣ್ಣ- ತಮ್ಮ ಎಂಬ ಮಾನವೀಯ ಸಂಬಂಧಗಳಲ್ಲಿ ಪರಸ್ಪರ ಸಂಘಜೀವಿಗಳಾಗಿ ಬದುಕುತ್ತಿದ್ದ ನಾವು ಆಧುನೀಕರಣ, ಜಾಗತೀಕರಣ, ನಗರೀಕರಣಗಳ ಪ್ರಭಾವ ಹಾಗೂ ಸುಳಿಗೆ ಸಿಲುಕಿ ಧನದ ವ್ಯಾಮೋಹ ಹಾಗೂ ಸುಖ- ವಿಲಾಸೀ ಜೀವನಕ್ಕೆ ಮಾರುಹೋಗಿ ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಂಡೆವು. ವಿದೇಶಿ ಸಂಸ್ಕೃತಿಯ ವ್ಯಾಮೋಹ ನಮ್ಮನ್ನು ಅತಂತ್ರ ಸ್ಥಿತಿಗೆ ತಳ್ಳಿತು. ಮಾನವೀಯ ಸಂಬಂಧಗಳ ಶಿಥಿಲತೆ ಹಾಗೂ ಆಧುನಿಕತೆ ಆರ್ಥಿಕ ಒತ್ತಡ ಮನುಷ್ಯನನ್ನು ಮೃಗಸ್ವರೂಪಿಗಳಾಗಿ ಬದಲಾಯಿಸಿತು. ಇಂತಹ ಸಂದರ್ಭದಲ್ಲಿ ಆಶ್ರಮಕ್ಕೆ ಭೇಟಿ ನೀಡುತ್ತಿರುವ ವಿವೇಕಾನಂದ ಪ. ಪೂ ಕಾಲೇಜಿನ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾದುದು ಎಂದರು.
ನಂತರ ಆಶ್ರಮದ ಸ್ಥಾಪನೆ ಹಾಗೂ ಅಲ್ಲಿರುವ ಮಕ್ಕಳು, ವೃದ್ದರ ಸ್ಥಿತಿಗತಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿಕೊಟ್ಟರು. ಪ್ರಾಂಶುಪಾಲರಾದ ಜೀವನ್ದಾಸ್ ಎ. ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ನೆರವೇರಿತು. ಬಳಿಕ ಮನೋರಂಜನಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನೀಡಿದರು.